ಧನಬಾದ್
		ಬಿಹಾರ ರಾಜ್ಯದ ಛೋಟಾ ನಾಗಪುರ ವಿಭಾಗದ ಒಂದು ಜಿಲ್ಲೆ; ಆ ಜಿಲ್ಲೆಯ ಆಡಳಿತ ಕೇಂದ್ರ ಧನಬಾದ್ ಜಿಲ್ಲೆ ಬಿಹಾರ ರಾಜ್ಯದಲ್ಲಿ  ಅತ್ಯಂತ ಸಣ್ಣದು.  ಇದರ ಪೂರ್ವ ಮತ್ತು ದಕ್ಷಿಣಕ್ಕೆ ಪಶ್ಚಿಮ ಬಂಗಾಳ, ಪಶ್ಚಿಮಕ್ಕೆ ಬಿಹಾರದ ಹಜಾರಿಬಾಗ್ ಜಿಲ್ಲೆ. ಉತ್ತರಕ್ಕೆ ಹಜಾರಿಬಾಗ್ ಮತ್ತು ಸಂತಾಲ್ ಪರಗಣಗಳು ಇವೆ.  ವಿಸ್ತೀರ್ಣ2,884 ಚ.ಕಿ.ಮೀ. (1,114ಚ.ಮೈ).  ಜನಸಂಖ್ಯೆ 14,66,156(1917). ಜನಸಂಖ್ಯೆಯಲ್ಲಿ 8,27,083 ಗ್ರಾಮ ನಿವಾಸಿಗಳು, 6,39,073 ನಗರನಿವಾಸಿಗಳು. ಜನಸಾಂದ್ರತೆ ಚ.ಕಿಮೀ.ಗೆ 508. ಈ ದೃಷ್ಟಿಯಿಂದ ಇದಕ್ಕೆ ಬಿಹಾರ ರಾಜ್ಯದಲ್ಲಿ ಐದನೆಯ ಸ್ಥಾನ.  ಈ ಜಿಲ್ಲೆಯ ಮಧ್ಯದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ದಾಮೋದರ್ ನದಿ ಹರಿಯುತ್ತದೆ.  ಇದಕ್ಕೆ ಕಟ್ಟಿರುವ ಪೈಥಾನ್ ಮತ್ತು ಪಾಂಚೆಟ್ ಕಟ್ಟೆಗಳಿಂದ ನೀರಾವರಿ ಸೌಲಭ್ಯ ಏರ್ಪಟ್ಟಿದೆ.  ಆದರೆ ಆಚೀಚಿನ ಪ್ರದೇಶಗಳಲ್ಲಿ  ಬತ್ತ, ಮುಸುಕಿನಜೋಳ, ಎಣ್ಣೆಬೀಜ ಬೆಳೆಯುತ್ತವೆ.  ಇದು ಭಾರತದ ಪ್ರಮುಖ ಕಲ್ಲಿದ್ದಲು ಉತ್ಪಾದಕ ಜಿಲ್ಲೆ. ಝಾರಿಯಾ ಮತ್ತು ರಾಣೀಗಂಜ್ ಕಲ್ಲಿದ್ದಲು ಗಣಿಗಳು ಈ ಜಿಲ್ಲೆಯಲ್ಲಿವೆ. ಕೆಂಪುಬಣ್ಣದ ಮಣ್ಣು, ಅಭ್ರಕ ಮತ್ತು ಮಿಂಚು ಹರಳುಗಳು ಜಿಲ್ಲೆಯ ಇತರ ಖನಿಜಗಳು. ಧನಬಾದ್ ಪಟ್ಟಣದ ದಕ್ಷಿಣಕ್ಕೆ 25ಕಿಮೀ ದೂರದ ಸಿಂಧ್ರಿಯಲ್ಲಿರುವ ರಸಗೊಬ್ಬರ ಕಾರ್ಖಾನೆ ಈ ಜಿಲ್ಲೆಯ ಒಂದು ದೊಡ್ಡ ಕೈಗಾರಿಕೆ.              

		ಕಲ್ಕತ್ತದಿಂದ 270ಕಿಮೀ. ದೂರದಲ್ಲಿರುವ ಧನಬಾದ್ ಪಟ್ಟಣದ ಜನಸಂಖ್ಯೆ 79,545. ಇಲ್ಲಿ ಭಾರತೀಯ ಗಣಿ ಶಾಲೆ ಇದೆ.  ಇದು ಬಿಹಾರದ ವಿಶ್ವವಿದ್ಯಾಲಯದಿಂದ ಮನ್ನಣೆ ಪಡೆದಿದೆ. ಇಲ್ಲಿರುವ ಇನ್ನೊಂದು ಸಂಸ್ಥೆ ಕೇಂದ್ರಿಯ ಇಂಧನ ಸಂಶೋಧನ ಸಂಸ್ಥೆ. ಧನಬಾದ್ ಕೃಷಿ ಉತ್ಪನ್ನಗಳ ಮುಖ್ಯ ವ್ಯಾಪಾರ ಕೇಂದ್ರ.
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ